ಕೆರೆನ್‍ಸ್ಕಿ, ಅಲೆಕ್ಸಾಂಡರ್ ಫೆಡೊರೋವಿಚ್

ರಷ್ಯದ ರಾಜಕೀಯ ನಾಯಕ. ರಷ್ಯನ್ ಕ್ರಾಂತಿಯ ಕಾಲದಲ್ಲಿ 1917ರ ಜುಲೈಯಿಂದ ನವೆಂಬರ್‍ವರೆಗೆ ತಾತ್ಕಾಲಿಕ ಸರ್ಕಾರದಲ್ಲಿ ಪ್ರಧಾನ ಮಂತ್ರಿಯಾಗಿದ್ದ. ಜನನ 1881 ಸಿಂಬಿರ್ಸ್‍ಕ್‍ನಲ್ಲಿ (ಈಗಿನ ಉಲ್ಯಾನೋವ್ಸ್‍ಕ್). ತಂದೆ ಶಾಲಾ ಉಪಾಧ್ಯಾಯ. ಕೆರೆನ್‍ಸ್ಕಿ ಸೇಂಟ್ ಪೀಟರ್ಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ನ್ಯಾಯಶಾಸ್ತ್ರ ಪದವೀಧರನಾಗಿ 1904ರಲ್ಲಿ ವಕಾಲತ್ತು ಪ್ರಾರಂಭಿಸಿದ. ಕೆರೆನ್‍ಸ್ಕಿಗೆ ಕ್ರಾಂತಿಕಾರಿ ವಿಚಾರಗಳ ಪರಿಚಯವಾದದ್ದು ಆ ವಿಶ್ವವಿದ್ಯಾಲಯದಲ್ಲಿದ್ದಾಗಲೇ. ರಾಜಕೀಯ ಆಪಾದನೆಗಳಿಗೆ ಗುರಿಯಾಗಿದ್ದ ಕ್ರಾಂತಿಕಾರರ ಪರವಾಗಿ ವಕಾಲತ್ತು ವಹಿಸಿ ಇವನು ವಿಶೇಷವಾಗಿ ಹೋರಾಡಿದ. 1912ರಲ್ಲಿ ನಾಲ್ಕನೆಯ ಡ್ಯೂಮ ಸಭೆಗೆ ಕೂಲಿಕಾರರ ಪ್ರತಿನಿಧಿಯಾಗಿ ಆಯ್ಕೆ ಹೊಂದಿದ. ಒಂದನೆಯ ಮಹಾಯುದ್ಧದ ಕಾಲದಲ್ಲಿ ಈತನ ಪಕ್ಷ ಪ್ರಗತಿಪರರೊಂದಿಗೆ ಸೇರದೆ ಪ್ರತ್ಯೇಕವಾಗಿತ್ತು. ಯುದ್ಧದಲ್ಲಿ ಭಾಗವಹಿಸಲು ಸೈನಿಕರಿಗೆ ಉತ್ಸಾಹ ಬರಬೇಕಾದರೆ ದೇಶದಲ್ಲಿ ಪ್ರಜಾಸತ್ತಾತ್ಮಕ ಸುಧಾರಣೆ ಜಾರಿಗೆ ಬರಬೇಕೆಂಬುದು ಈತನ ಅಭಿಪ್ರಾಯವಾಗಿತ್ತು. ಕೆರೆನ್‍ಸ್ಕಿ ಒಳ್ಳೆಯ ವಾಗ್ಮಿಯಾಗಿದ್ದ. ಮಾನವಸ್ವಾತಂತ್ರ್ಯ ಸಾಧನೆಗಾಗಿ ನಡೆಸಿದ ಮಹಾ ಪ್ರಯತ್ನವೇ ಕ್ರಾಂತಿ-ಎಂಬುದಾಗಿ ಅವನು ಕಂಡುಕೊಂಡಿದ್ದ. ಆದರೆ ತನ್ನ ಅದಮ್ಯ ಉತ್ಸಾಹದ ಉರುಬಿನಲ್ಲಿ ಅವನು ಮಾಡಿದ ಪ್ರಮಾದಗಳು ಅನೇಕ. ಇದರಿಂದಾಗಿ ಅವನ ತೀರ್ಮಾನಗಳು ಪದೇಪದೇ ವ್ಯತ್ಯಾಸವಾಗುತ್ತಿದ್ದುವು. ಒಂದು ನೆಲೆಯಿಂದ ಇನ್ನೊಂದು ನೆಲೆಗೆ ಅವನು ಪದೇಪದೇ ಬದಲಾಗುತ್ತಿದ್ದುದರಿಂದ ಅವನು ಸ್ಥೈರ್ಯ ಸಾಧಿಸಲಾರದೆ ಹೋದ.

ಪೆಟ್ರೋಗ್ರಾಡ್ ಕಾರ್ಮಿಕ ಪ್ರತಿನಿಧಿಗಳ ಸೋವಿಯೆತ್ತಿನ ಬೂಷ್ರ್ವಾವಿರೋಧಿ ಸಿದ್ಧಾಂತವನ್ನು ಕೆರೆನ್‍ಸ್ಕಿ ಒಪ್ಪಲಿಲ್ಲ. ಪರಿಸ್ಥಿತಿಯೊಂದಿಗೆ ಒಪ್ಪಂದ ಮಾಡಿಕೊಂಡ. 1917ರ ಮಾರ್ಚ್ 15ರಂದು ರಾಜಕುಮಾರ ಲ್ವಾಫನ ಸರ್ಕಾರದಲ್ಲಿ ಮಂತ್ರಿಯಾದ. ಸೋವಿಯೆತ್ತಿನ ಸಮಾಜವಾದಿ ಕ್ರಾಂತಿಕಾರಿ ಮತ್ತು ಮೆನ್ಷೆವಿಕ್ ಸದಸ್ಯರೊಂದಿಗೆ ಸಖ್ಯ ಸಾಧಿಸಿದ. ಅವರನ್ನು ಒಳಗೊಂಡ ಸಂಮಿಶ್ರ ಸರ್ಕಾರ ಸ್ಥಾಪಿತವಾಗಲು ಕೆರೆನ್‍ಸ್ಕಿಯ ಪ್ರಯತ್ನಗಳೇ ಕಾರಣ. ಸಂಮಿಶ್ರ ಸರ್ಕಾರದಲ್ಲಿ ಕೆರೆನ್‍ಸ್ಕಿಗೆ ಯುದ್ಧಸಚಿವತ್ವ ದೊರಕಿತು. ಕ್ರಾಂತಿಯಿಂದ ಲಭ್ಯವಾಗಿದ್ದ ಸ್ವಾತಂತ್ರ್ಯವನ್ನು ಶಿಸ್ತಿನಿಂದ ರಕ್ಷಿಸಬೇಕೆಂದು ಈತ ಸೈನ್ಯಕ್ಕೆ ಮಾಡಿಕೊಂಡ ಮನವಿ ವ್ಯರ್ಥವಾಯಿತು. ಸೈನ್ಯದಲ್ಲಿ ಮೊದಲೇ ಕಡಿಮೆಯಾಗಿದ್ದ ಶಿಸ್ತು ಈತನ ಸುಧಾರಣೆಯಿಂದ ಇನ್ನೂ ಕಡಿಮೆಯಾಗಿ ಕೊನೆಗೆ ಕುಸಿದೇ ಹೋಯಿತು.

ಸರ್ಕಾರದಲ್ಲಿ ಮತ್ತೊಮ್ಮೆ ಬಿಕ್ಕಟ್ಟು ಸಂಭವಿಸಿತು. ಜುಲೈ 21ರಂದು ಕೆರೆನ್‍ಸ್ಕಿಯೇ ಪ್ರಧಾನಿಯಾದ. ಆದರೆ ಈತನ ಆಡಳಿತದ ಕಾಲದಲ್ಲಿ ಎಡಬಲ ಪಕ್ಷಗಳೆರಡೂ ಇವನನ್ನು ತೊರೆದುವು. ಪ್ರತಿಕ್ರಾಂತಿಯ ಅಂಜಿಕೆ ಪ್ರಬಲವಾಯಿತು. ಮಹಾದಂಡನಾಯಕನಾದ ಜನರಲ್ ಎಲ್.ಜಿ.ಕಾರ್ನಿಲಾಫನನ್ನು ಸೆಪ್ಟೆಂಬರ್ 9ರಂದು ಕೆರೆನ್‍ಸ್ಕಿ ಒಮ್ಮೆಗೇ ಬರ್ತರ್ಫ್ ಮಾಡಿದ. ಸೌಮ್ಯವಾದಿಗಳ ಪ್ರತಿನಿಧಿಯೆನಿಸಿದ್ದ ಕಾರ್ನಿಲಾಫನನ್ನು ವಜಾ ಮಾಡಿದ್ದರಿಂದ ಅವರಿಗೆ ಅಸಮಾಧಾನವಾಯಿತು. ಸರ್ವಾಧಿಕಾರಿಯಾಗಬೇಕೆಂದು ಕೆರೆನ್‍ಸ್ಕಿ ಸಂಚು ಹೂಡಿದ್ದಾನೆಂದು ತೀವ್ರವಾದಿಗಳು ಅವನ ಬಗ್ಗೆ ಕೋಪಗೊಂಡರು. ಅಲ್ಲದೆ ಅವರು ಬಯಸಿದ್ದ ತೀವ್ರ ಕ್ರಮಗಳನ್ನು ಜಾರಿಗೆ ತರಲು ಕೆರೆನ್‍ಸ್ಕಿ ಒಪ್ಪಲಿಲ್ಲ. ಅವನ ಸಂಪುಟದಲ್ಲೇ ಒಡಕು ಉದ್ಭವಿಸಿತು. ಬಾಲ್ಷೆವಿಕರಿಗೆ ಜನರು ಬೆಂಬಲ ನೀಡುವುದಿಲ್ಲವೆಂದು ಕೆರೆನ್‍ಸ್ಕಿ ಭಾವಿಸಿದ್ದ. ಆದರೆ ನವೆಂಬರ್ 6ರಂದು ಬಾಲ್ಷೆವಿಕರು ಪ್ರಹರಿಸಿದರು. ಚಳಿಗಾಲದ ಅರಮನೆಯಿಂದ ಕೆರೆನ್‍ಸ್ಕಿ ತಲೆತಪ್ಪಿಸಿಕೊಂಡ. ಸನಿಯದಲ್ಲಿದ್ದ ಸೇನಾತುಕಡಿಗಳ ನೆರವಿಗಾಗಿ ಪ್ರಾರ್ಥಿಸಿದ. ಆದರೆ ಅವರು ಇವನನ್ನು ಲಕ್ಷಿಸಲಿಲ್ಲವಷ್ಟೇ ಅಲ್ಲ, ಅವರಿಂದ ವಿರೋಧವೇ ಕಾದಿತ್ತು. ಕೆರೆನ್‍ಸ್ಕಿ ಇಂಗ್ಲೆಂಡಿಗೆ ಪಲಾಯನ ಮಾಡಿದ. ಅಲ್ಲಿಂದ ಫ್ರಾನ್ಸಿಗೆ ಹೋಗಿ, ಕೊನೆಗೆ ಅಮೆರಿಕದಲ್ಲಿ ನೆಲಸಿದ. ಪ್ರೆಲ್ಯೂಡ್ ಟು ಬಾಲ್ಷಿವಿಸು; ದಿ ಕಾರ್ನಿಲಾಫ್ ರಿವೋಲ್ಟ್ (1919), ದಿ ಕೆಟಾಸ್ಟ್ರಫಿ (1927), ದಿ ಕ್ರುಸಿಫಿಕ್ಷನ್ ಆಫ್ ಲಿಬರ್ಟಿ (1934)-ಇವು ಕೆರೆನ್‍ಸ್ಕಿ ಬರೆದಿರುವ ಕೆಲವು ಪುಸ್ತಕಗಳು. 	  				
(ಬಿ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ